ad

Saturday 16 January 2021

ಬೈಕ್ ಅಲ್ಲಿ ಸೈಡ್ ಮಿರರ್ ಇಲ್ಲಾಂದ್ರೆ , ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಿಲ್ಲ ಅಂದ್ರೆ ಬೀಳತ್ತೆ ದಂಡ

     ದೆಹಲಿ  : ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ದಂಡ ವಿಧಿಸುತ್ತಿದೆ. ಬೈಕ್​ನಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಮುಂದೆ ಕೂರುವವರು ಕಡ್ಡಾಯವಾಗಿ ಸೀಟ್​ಬೆಲ್ಟ್​ ಧರಿಸಬೇಕು ಹೀಗೆ ಹಲವು ನಿಯಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಿಗಿಗೊಳಿಸಲಾಗಿದೆ. ಜನರು ನಿಯಮ ಪಾಲಿಸಬೇಕು ಎನ್ನುವ ಕಾಳಜಿಗಿಂತ ದಂಡ ತೆರಬೇಕು ಎನ್ನುವ ಭಯದಲ್ಲೇ ಒಲ್ಲದ ಮನಸ್ಸಿನಿಂದಾದರೂ ಅವುಗಳಿಗೆ ಒಗ್ಗಿಕೊಂಡಿದ್ದಾರೆ.

                         ಇದೀಗ ವಾಹನ ಸವಾರರಿಗೆ ಸಂಬಂಧಿಸಿದಂತೆ ಮತ್ತೊಂದು ನಿಯಮ ಜಾರಿಯಾಗಿದೆ. ಈ ನೂತನ ನಿಯಮದ ಅನುಸಾರ ಬೈಕ್​ನಲ್ಲಿ ಸೈಡ್​ ಮಿರರ್​ ಇರದಿದ್ದರೆ ₹500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್​ ಬೆಲ್ಟ್​ ಧರಿಸದಿದ್ದರೆ ₹1000 ದಂಡ ವಿಧಿಸಬಹುದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದಲೇ ನಿಯಮ ಜಾರಿಯಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.

 

ಬೈಕ್​ನಲ್ಲಿ ಸೈಡ್​ ಮಿರರ್​, ಕಾರಿನಲ್ಲಿ ಹಿಂಬದಿ ಸವಾರರಿಗೆ ಸೀಟ್​ ಬೆಲ್ಟ್​ ಕಡ್ಡಾಯ



                            ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ದೆಹಲಿ ಸಂಚಾರ ಪೊಲೀಸರು, ಬಹುತೇಕ ಬೈಕ್​ಗಳಲ್ಲಿ ಸೈಡ್​ ಮಿರರ್​ ಇರುವುದೇ ಇಲ್ಲ. ಕೆಲವರು ಶೋಕಿಗಾಗಿ ತೆಗೆದಿಡುತ್ತಾರೆ. ಇದರಿಂದ ಅಪಘಾತ ಆಗುವ ಸಂಭವ ಹೆಚ್ಚಿದೆ. ಅಂತೆಯೇ, ಕಾರಿನಲ್ಲಿ ಹಿಂಬದಿ ಕುಳಿತು ಸಂಚರಿಸುವವರು ಸೀಟ್​ ಬೆಲ್ಟ್​ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದು ದೊಡ್ಡ ಮಟ್ಟದ ಅಪಘಾತಗಳಲ್ಲಿ ಪ್ರಾಣಕ್ಕೆ ಸಂಚಕಾರ ತಂದೊಡುತ್ತಿದೆ. ಆದ್ದರಿಂದ, ಈ ಕುರಿತು ವಾಹನ ಸವಾರರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

                            ಈ ನಿಯಮಗಳು ಹೊಸದಾಗಿ ರೂಪುಗೊಂಡಿರುವುದೇನಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲವಷ್ಟೇ. ಇನ್ನುಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

                            ನಿನ್ನೆಯಿಂದಲೇ ದೆಹಲಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಆರಂಭಿಕ ಹಂತದಲ್ಲಿ ಸೈಡ್​ ಮಿರರ್ ಅಳವಡಿಸಿದ ಬೈಕ್​ ಸವಾರರಿಗೆ ₹500 ಮತ್ತು ಕಾರಿನಲ್ಲಿ ಸೀಟ್​ ಬೆಲ್ಟ್​ ಧರಿಸದೇ ಕುಳಿತುಕೊಳ್ಳುವ ಹಿಂಬದಿ ಸವಾರರಿಗೆ ₹1000 ದಂಡ ವಿಧಿಸುವುದಾಗಿ ಪ್ರಕಟಣ ಹೊರಡಿಸಿದ್ದಾರೆ.



No comments:

Post a Comment